ನಾಡೀ ಶುದ್ಧಿ – ಕಿರು ನೋಟ
ಒಟ್ಟು 72,000 ನಾಡೀಗಳು ನಮ್ಮ ಶರೀರದಲ್ಲಿರುತ್ತವೆ. ಅದರಲ್ಲಿ 14 ನಾಡೀಗಳು ಪ್ರಮುಖ
1) ಇಡಾ 2) ಪಿಂಗಳಾ 3) ಸುಷುಮ್ನಾ 4) ಸರಸ್ವತೀ 5) ವಾರುಣೀ 6) ಪೂಷಾ
7) ಹಸ್ತಿಜಿಹ್ವಾ 8) ಯಶಸ್ವಿನೀ 9) ವಿಶ್ವೋದರೀ 10) ಕುಹೂ 11) ಶಂಖಿನೀ 12) ಪಯಸ್ವಿನೀ
13) ಅಂಬುಲಿಸಾ 14) ಗಾಂಧಾರೀ
ನಾಡೀಶುದ್ಧಿ ಅವಶ್ಯಕತೆ :
ಸುಶ್ರುತ ಹಾಗೂ ದುಷ್ಯಂತಾನುಸಾರವಾದ ಕರ್ಮಫಲದಿಂದ ಜನನ – ಮರಣ ಪ್ರಾಪ್ತಿ. ದೇಹವೆಂಬ ಘಟವನ್ನು ದೃಢವಾಗಿಸುವುದು ಯೋಗದ ಅನಿವಾರ್ಯತೆ ಹಾಗೂ ಅತ್ಯವಶ್ಯ. ದೇಹವನ್ನು ಯೋಗಾಗ್ನಿಯಲ್ಲಿ ಸುಟ್ಟು ಸ್ಥಿರಗೊಳಿಸುವಿಕೆಯೇ “ ನಾಡೀ ಶುದ್ಧಿ “.
1) ಷಟ್ ಕರ್ಮ – ದೇಹ ಶುದ್ಧಿ
2) ಆಸನ – ದೇಹ ಶಕ್ತಿದಾಯಕ
3) ಮುದ್ರೆ – ಸ್ಥಿರತೆ, ಸ್ಥೈರ್ಯದಾಯಕ
4) ಪ್ರತ್ಯಾಹಾರ – ಧೈರ್ಯಕಾರಕ
5) ಪ್ರಾಣಾಯಾಮ – ಲಾಘವಕರ
6) ಧ್ಯಾನ – ಆತ್ಮದರ್ಶನಕಾರಕ
ನಾಡೀ ಶುದ್ಧಿ ಕ್ರಮ :
1) ಸಮನು – ಬೀಜಮಂತ್ರಯುಕ್ತ
2) ನಿರ್ಮನು – ಧೌತಿ ಕರ್ಮದ ಮೂಲಕ ; ಧೌತಿ ಕರ್ಮ – ಷಟ್ ಕ್ರಿಯೆಯಲ್ಲಿ ಒಂದು
ಷಟ್ ಕ್ರಿಯೆಗಳು / ಶೋಧನ ಕ್ರಿಯೆ :
1) ಧೌತಿ 2) ಬಸ್ತಿ 3) ನೇತಿ 4) ನೌಲಿ / ನೌಲಿಕಿ 5) ತ್ರಾಟಕ 6) ಕಪಾಲಭಾತಿ
1) ಧೌತಿ : ವಿಧಾನ ( ಘೇರಂಡ ಸಂಹಿತಾ 13 / 43 )
a) ಅಂತರ್ಧೌತಿ b ) ದಂತ ಧೌತಿ c) ಹೃದ್ಧೌತಿ d) ಮೂಲಶೋಧನ
ವಾತಸಾರ ದಂತಮೂಲ ದಂಡಧೌತಿ
ವಾರಿಸಾರ ಜಿಹ್ವಾಮೂಲ ವಮನಧೌತಿ
ವಹ್ನಿಸಾರ ಕರ್ಣರಂಧ್ರ ವಸ್ತ್ರಧೌತಿ
ಬಹಿಷ್ಕೃತ ಕಪಾಲರಂಧ್ರ
2) ಬಸ್ತಿ:
a) ಜಲ ಬಸ್ತಿ b) ಸ್ಥಳ ಬಸ್ತಿ
3) ತ್ರಾಟಕ :
a) ಅಂತ: ತ್ರಾಟಕ b) ಮಧ್ಯತ್ರಾಟಕ c) ಬಾಹ್ಯತ್ರಾಟಕ
4) ನೌಲಿಕಿ / ನೌಲಿ :
a) ವಾಮ ನೌಲಿ b) ದಕ್ಷಿಣ ನೌಲಿ c) ಮಧ್ಯ ನೌಲಿ
5) ನೇತಿ :
a) ಜಲ ನೇತಿ b) ದಂಡ ಅಥವಾ ವಸ್ತ್ರ ನೇತಿ
6) ಕಪಾಲಭಾತಿ :
a) ವಾತಕ್ರಮ b) ವ್ಯುತ್ಕ್ರಮ c) ಶೀತ್ಕ್ರಮ
ನಾಡೀ ಶುದ್ಧಿ
ಪ್ರಾಣಾಯಾಮವನ್ನು ಪ್ರಾರಂಭಿಸುವ ಮೊದಲು ನಾಡೀಶಿದ್ಧಿ ಆಚರಣೆಯನ್ನು ಘೇರಂಡ ಸಂಹಿತೆಯಲ್ಲಿ ಹೇಳಲಾಗಿದೆ. ಪ್ರಾಣಾಯಾಮದ ಮೊದಲಿಗೆ ನಾಡೀಶುದ್ಧಿ ಮಾಡಿದಾಗ ಪ್ರಾಣಾಯಾಮ ಆಚರಣೆಗೆ ಅರ್ಹತೆ ದೊರೆಯುತ್ತದೆ. ನಾಡೀಗಳು ಅಶುದ್ಧವಾಗಿರುವವರೆಗೆ ನಾಡೀಗಳಲ್ಲಿ ವಾಯುವಿನ (ಪ್ರಾಣಶಕ್ತಿಯ) ಪ್ರವೇಶ ಸಾಧ್ಯವಾಗದು ಎಂದು ಘೇರಂಡರು ಹೇಳಿರುತ್ತಾರೆ.
ನಾಡೀಗಳು – ಅದರ ಪರಿಚಯ:
ದೇಹದಲ್ಲಿ ಒಟ್ಟು 72,000 ನಾಡೀಗಳು ಇವೆ. ಅವುಗಳಲ್ಲಿ ಹದಿನಾಲ್ಕು ನಾಡೀಗಳು ಮುಖ್ಯವಾಗಿರುತ್ತವೆ. ಶಾಂಡಿಲ್ಯೋಪನಿಷತ್ತಿನಲ್ಲಿ ಹೇಳಿರುವಂತೆ
ಇಡಾ ಪಿಂಗಳಾ ಸುಷುಮ್ನಾ ಸರಸ್ವತೀ ವಾರುಣೀ ಪೂಷಾ |
ಹಸ್ತಿಜಿಹ್ವಾ ಯಶಸ್ವಿನೀ ವಿಶ್ವೋದರೀ ಕುಹೂ ಶಂಖಿನೀ ||
ಪಯಸ್ವಿನೀ ಅಂಬುಲಸಾ ಗಾಂಧಾರೀತಿ ನಾಡ್ಯಾಶ್ಚತುರ್ದಶಾನಿ ಭವಂತಿ ||
ಇಡಾ, ಪಿಂಗಳಾ, ಸುಷುಮ್ನಾ, ಸರಸ್ವತೀ, ವಾರುಣೀ, ಪೂಷಾ, ಹಸ್ತಿಜಿಹ್ವಾ, ಯಶಸ್ವಿನೀ, ವಿಶ್ವೋದರೀ, ಕುಹೂ, ಶಂಖಿನೀ, ಪಯಸ್ವಿನೀ, ಅಂಬುಲಸಾ, ಗಾಂಧಾರೀ, ಇವು ಪ್ರಮುಖ 14 ನಾಡಿಗಳು.
ಶ್ರುತಿ, ಶಾಸ್ತ್ರಾದಿಗಳು ಹೇಳುವಂತೆ ಬ್ರಹ್ಮಾಂಡದಲ್ಲಿ ಮಹಾನದಿಗಳು, ನದಿಗಳು, ಝರಿಗಳು, ತೊರೆಗಳು ಹರಿಯುವಂತೆ ಪಿಂಡಾಂಡರೂಪವಾದ ನಮ್ಮ ದೇಹದಲ್ಲಿ 72 ಸಾವಿರ ನಾಡೀಗಳು ಹರಿಯುತ್ತವೆ. ಇವೆಲ್ಲವೂ ದೇಹವ್ಯಾಪಿಯಾಗಿದ್ದು ಚೈತನ್ಯವಾಹಕ, ಪ್ರಾಣವಾಹಕವಾಗಿವೆ.
ಇವುಗಳ ಸ್ಥಾನ :
1) ಇಡಾನಾಡೀ – ಎಡ ಮೂಗಿನ ಹೊಳ್ಳೆ (ಚಂದ್ರ, ಗಂಗಾ)
2) ಪಿಂಗಳಾ ನಾಡೀ – ಬಲ ಮೂಗಿನ ಹೊಳ್ಳೆ (ಸೂರ್ಯ, ಯಮುನಾ)
3) ಸುಷುಮ್ನಾ – ಇಡಾ ಪಿಂಗಳಾ ನಡುವೆ
(ಗುಹಪಥ, ಕುಲಮಾರ್ಗ, ಸರಸ್ವತೀ, ಬ್ರಹ್ಮನಾಡೀ, ಬ್ರಹ್ಮಪಥ, ಬ್ರಹ್ಮರಂಧ್ರ) ;ಅಗ್ನಿ ದೇವತೆ ಇದರ ಅಧಿದೇವತೆ.
4) ಗಾಂಧಾರಿ – ಎಡ ಕಣ್ಣಿನ ಕಡೆ
5) ಹಸ್ತಿಜಿಹ್ವಾ – ಬಲ ಕಣ್ಣಿನ ಕಡೆ
6) ಯಶಸ್ವಿನೀ – ಎಡ ಕಿವಿಯ ಕಡೆ
7) ಪೂಷಾ – ಬಲ ಕಿವಿಯ ಕಡೆ
8) ಅಂಬುಲಿಸಾ – ಮುಖದ (ಬಾಯಿಯ) ಭಾಗ
9) ಕುಹೂ – ಲಿಂಗದ ಕಡೆ
10) ಶಂಖಿನೀ – ಗುದ ಪ್ರದೇಶದ ಕಡೆ
72,000 ನಾಡೀಗಳು – ಮಣಿಪೂರ ಚಕ್ರದ ಕೆಳಗೆ ಹಾಗೂ ಸ್ವಾಧಿಷ್ಠಾನ ಚಕ್ರದ ಮೇಲೆ – ಪಕ್ಷಿಯ ಮೊಟ್ಟೆಯಾಕಾರದಲ್ಲಿ ಗೆಡ್ಡೆಯಂತಿರುತ್ತದೆ. ಇದನ್ನು Main transformer ಎಂದು ಅರ್ಥೈಸಿಕೊಳ್ಳಬಹುದು. ಕಂದ – ಗೆಡ್ಡೆಯಿಂದ ಹೊರಟ ಚೈತನ್ಯವಾಹೀ ನಾಡೀಗಳು ಇಡೀ ದೇಹವನ್ನು ವ್ಯಾಪಿಸಿರುತ್ತವೆ. ಈ ದಶನಾಡೀಗಳು ಅತಿ ಮುಖ್ಯವಾಗಿದ್ದು ನವದ್ವಾರವನ್ನು ಆಶ್ರಯಿಸಿ ಶರೀರರಕ್ಷಣೆ ಮಾಡುತ್ತದೆ ಅಲ್ಲದೇ ಜೀವಾತ್ಮ, ಪರಮಾತ್ಮರ ಐಕ್ಯತೆಗೆ ಸಹಕಾರಿಯಾಗಿರುತ್ತವೆ. ಪ್ರಾಣಶಕ್ತಿಯು ಜೀವಧಾರಣೆಗೂ ಬೇಕು ಅಂತೆಯೇ ಆತ್ಮ ಸಾಕ್ಷಾತ್ಕಾರಕ್ಕೂ ಬೇಕು. ಇಂತಹ ಪ್ರಮುಖ ಪ್ರಾಣವು 72 ಸಾವಿರ ನಾಡಿಗಳಲ್ಲಿ ಪ್ರವಹಿಸುತ್ತದೆ.
ಆಸನ, ಪ್ರಾಣಾಯಾಮದಿಂದ ಇಡಾ, ಪಿಂಗಳಾ ಶುದ್ಧಿಯಾಗಿ ಪ್ರಾಣವಾಯುವು ಸುಷುಮ್ನಾ ನಾಡಿಯ ಮೂಲಕ ಪ್ರವಹಿಸಲು ಅನುವುಮಾಡಿಕೊಡುತ್ತದೆ. ಬಂಧ, ಮುದ್ರೆಯ ಮೂಲಕ ಕುಂಡಲಿನೀ ಶಕ್ತಿ ಸುಷುಮ್ನಾ ದ್ವಾರವನ್ನು ಪ್ರವೇಶಿಸಲು ಸಹಾಯವಾಗುತ್ತದೆ. ತನ್ಮೂಲಕ ಆಧ್ಮಾತ್ಮ ಸಾಧನೆಗೆ ಸಹಕಾರಿಯಾಗಿರುತ್ತದೆ.
ನಾಡೀಶುದ್ಧಿಯ ಅವಶ್ಯಕತೆ :
नास्ति मायात्स्मः पाशो नास्ति योगात्परं बलमू ।
नास्ति ज्ञानात्परो बन्धुर्नाहंकारात्परो रिपुः ॥ घेरण्ड संहिता – 1 – 4
ಮಾಯೆಗೆ ಸಮನಾದ ಬಂಧನವಿಲ್ಲ, ಯೋಗಕ್ಕಿಂತಲೂ ಉತ್ತಮವಾದ ಬಲ ಮತ್ತೊಂದಿಲ್ಲ. ಜ್ಞಾನಕ್ಕಿಂತಲೂ ಮಿಗಿಲಾದ ಬಂಧುವಿಲ್ಲ. ಅಂತೆಯೇ ಅಹಂಕಾರಕ್ಕಿಂತ ಹೆಚ್ಚಿನ ಶತ್ರುವಿಲ್ಲ.
ಯೋಗವು ಶರೀರ ಬಲ, ಮನೋಬಲವನ್ನು ನೀಡುವ ಅತ್ಯುತ್ತಮ ವಿಧಾನವಾಗಿದೆ ಎಂಬುದು ಇದರಿಂದ ತಿಳಿದುಬರುತ್ತದೆ.
सुकृतैः दुष्कृतैः कार्यैः जायते प्राणिनां घटः ।
घटात् उत्पद्यते कर्म घटीयन्त्रं यथा भ्रवेत् ॥ घेरण्ड संहिता 1 / 6
ಒಳ್ಳೆಯ ಹಾಗೂ ಕೆಟ್ಟ ಕರ್ಮದ ಫಲವಾಗಿ ಜೀವಜಂತುಗಳು ತಮ್ಮ ದೇಹವನ್ನು ಪಡೆಯುತ್ತವೆ. ದೇಹ ಧರಿಸಿದ ಪ್ರಾಣಿಗಳು ಪುನರ್ಜನ್ಮವನ್ನು ಕರ್ಮದಿಂದ ಪಡೆಯುತ್ತವೆ. ಈ ರೀತಿ ಜನ್ಮ – ಮರಣವೆಂಬ ಚಕ್ರವು ಘಟೀಯಂತ್ರದಂತೆ ತಿರುಗುತ್ತಿರುತ್ತದೆ. ಇಲ್ಲಿ ದೇವನನ್ನೂ ಸಹ ಘಟ / ಮಡಕೆಗೆ ಹೋಲಿಸಿದ್ದಾರೆ. ದೇಹವೆಂಬ ಮಡಕೆಯನ್ನು ದೃಢವಾಗಿ ಮಾಡಲು ಯೋಗದ ಅನಿವಾರ್ಯತೆ, ಅಂತೆಯೇ ಕರ್ಮಾನುಸಾರ ದೇಹಧಾರಣೆಯು ಆಗುವುದೆಂದು ಸ್ಪಷ್ಟಪಡಿಸಿದ್ದಾರೆ.
आमकुम्भमिवाभस्थः जीर्यमाणः सदा घटः ।
योगानलेन संदह्यात् घटशुद्धिं समाचरेत् ॥ घेरण्ड संहिता 1 / 8
ಸುಡದೇ ಇರುವ ಮಣ್ಣಿನ ಗಡಿಗೆಯು ನೀರಿನಲ್ಲಿದ್ದರೆ ಕರಗುವಂತೆ ದೇಹವು ಯಾವಾಗಲೂ ನಶಿಸಿಹೋಗುತ್ತದೆ. ಆದ್ದರಿಂದ ಈ ದೇಹವನ್ನು ಯೋಗವೆಂಬ ಅಗ್ನಿಯಲ್ಲಿ ಸುಟ್ಟು ಸ್ಥಿರಗೊಳಿಸಬೇಕು.
शरीरमाद्यं खलु धर्मसाधनम् ॥
ಎಂಬ ಮಾತಿನಂತೆ ಬಲಯುತವಾದ ಶರೀರದಿಂದ ಮಾತ್ರ ಪುರುಷಾರ್ಥ ಸಾಧ್ಯ. ಇಂತಹ ಬಲಯುತ ಶರೀರನಿರ್ಮಾಣದಲ್ಲಿ ಯೋಗದ ಪಾತ್ರ ಅತ್ಯಂತ ಹಿರಿದು. ಶರೀರ ದೃಢತೆ ಹಾಗೂ ಮನೋಬಲವೃದ್ಧಿಗಾಗಿ ನಾಡೀಶುದ್ಧಿ ಅತ್ಯಂತ ಅಗತ್ಯವೆಂದು ಯೋಗದಲ್ಲಿ ಹೇಳುತ್ತಾರೆ.
ಸಪ್ತಸಾಧನಗಳು :
ಶೋಧನ – ದೃಢತಾ – ಸ್ಥೈರ್ಯ – ಧೈರ್ಯ – ಲಾಘವ – ಪ್ರತ್ಯಕ್ಷ – ಹಾಗೂ ನಿರ್ಲಿಪ್ತ (ಸಮಾಧಿ) ಗಳು ದೇಹವನ್ನು ಸ್ಥಿರಗೊಳಿಸುವ ಏಳು ಸಾಧನೆಗಳಾಗಿವೆ.
ಷಟ್ ಕರ್ಮಗಳು ದೇಹಶುದ್ಧಿ ಮಾಡಿದರೆ.ಆಸನಗಳು ದೇಹದ ಶಕ್ತಿಯನ್ನು ವರ್ಧಿಸುತ್ತವೆ. ಮುದ್ರೆಗಳು ಸ್ಥಿರತೆ / ಸ್ಥ್ವೆರ್ಯವನ್ನು ದೊರಕಿಸಿಕೊಡುತ್ತವೆ. ಹಾಗೆಯೇ ಪ್ರತ್ಯಾಹಾರವು ಧೈರ್ಯವನ್ನೂ, ಪ್ರಾಣಾಯಾಮವು ಲಾಘವವನ್ನೂ, ಧ್ಯಾನವು ಆತ್ಮದರ್ಶನ (ಪ್ರತ್ಯಕ್ಷ) ವನ್ನೂ, ಸಮಾಧಿಯು ನಿರ್ಲಿಪ್ತತೆಯನ್ನೂ ದೊರಕಿಸಿಕೊಡುತ್ತದೆ.
ನಾಡೀಶುದ್ಥಿಯು ಶೋಧನ – ಷಟ್ ಕರ್ಮ ಹಾಗೂ ನಾಡೀಶುದ್ಧಿ ಪ್ರಾಣಾಯಾಮವನ್ನು ಒಳಗೊಂಡಿರುತ್ತದೆ.
ನಾಡೀಶುದ್ಧಿ : ಕ್ರಮದ ವಿವರಣೆ
ಘೇರಂಡ ಸಂಹಿತೆಯ 5 ಉಪದೇಶ (ಅಧ್ಯಾಯ) ಗಳಲ್ಲಿ ಈ ರೀತಿ ಹೇಳಲಾಗಿದೆ.
34 ರಿಂದ 38 ನೇ ಶ್ಲೋಕಗಳಲ್ಲಿ ನಾಡೀಶುದ್ಥಿಯು 2 ವಿಧವಾಗಿದೆ.
1) ಸಮನು 2) ನಿರ್ಮನು ಎಂದು
ಸಮನು ನಾಡೀಶುದ್ಧಿ
ಬೀಜಮಂತ್ರದೊಡನೆ ಮಾಡುವ ಮಾನಸಿಕ ಆಚರಣೆಯನ್ನು “ ಸಮನು “ ಎಂದು ಕರೆಯುವರು.
ತನ್ನ ದೇಹದ ವಿವಿಧ ಭಾಗಗಳಲ್ಲಿ ದೇವತೆಗಳನ್ನು ಆಹ್ವಾನಿಸಿ ಪ್ರಾಣಾಯಾಮ ಸಿದ್ಧಿಗಾಗಿ ಸಮನು ಪ್ರಾಣಾಯಾಮ ಆಚರಿಸಬೇಕು.
1) ವಾಯು ಬೀಜ ಮಂತ್ರ “ ಯಂ “ – ಕಾಂತಿಪೂರ್ಣ ಮತ್ತು ಧೂಮ್ರಮಾರ್ಗವನ್ನು ಚಿಂತಿಸುತ್ತಾ 16 ಬಾರಿ ಬೀಜ ಮಂತ್ರ ಉಚ್ಚರಿಸುತ್ತಾ ಎಡ ಮೂಗು – ಚಂದ್ರ ನಾಡಿಯಿಂದ ಪೂರಕ ಮಾಡಿಕೊಳ್ಳಬೇಕು.
2) ಕುಂಭಕದಲ್ಲಿ 64 ಸಾರಿ ಬೀಜಮಂತ್ರ ಉಚ್ಚಾರಣೆ.
3) 32 ಬಾರಿ ಮಂತ್ರ ಉಚ್ಚಾರಣೆಯೊಂದಿಗೆ ಸೂರ್ಯನಾಡಿಯಿಂದ ರೇಚಕ.
ಅಗ್ನಿ ಮೂಲ ಮಂತ್ರ
1) ನಾಭಿಯಲ್ಲಿರುವ ಅಗ್ನಿಯನ್ನು ಜಾಗೃತಗೊಳಿಸಿ ಅದನ್ನೇ ಚಿಂತಿಸುತ್ತಾ “ ರಂ “ ಬೀಜ ಉಚ್ಚಾರಣೆಯನ್ನು ಪೂರಕ – ಚಂದ್ರ ನಾಡಿ – 16 ಬಾರಿ ಮಂತ್ರೋಚ್ಚಾರದೊಡನೆ ಪೂರಕ.
2) ಕುಂಭಕ – 64 ಬಾರಿ “ ರಂ “ ಉಚ್ಚರಿಸುತ್ತಾ ಕುಂಭಕ .
3) ರೇಚಕ – 32 ಬಾರಿ “ ರಂ “ ಉಚ್ಚರಿಸುತ್ತಾ ರೇಚಕ.
ಚಂದ್ರ ಬಿಂಬವನ್ನು ಮೂಗಿನ ತುದಿಯಲ್ಲಿ ಚಿಂತಿಸುತ್ತಾ
1) ಪೂರಕ : 16 ಸಾರಿ “ ರಂ “ ಬೀಜಮಂತ್ರೋಚ್ಚರಣೆ – ಎಡ
2) ಕುಂಭಕ : 64 ಸಾರಿ “ ವಂ” ಬೀಜಮಂತ್ರ ಉಚ್ಚಾರಣೆ
3) ರೇಚಕ : 32 ಸಾರಿ “ ಲಂ “ ಬೀಜಮಂತ್ರ ಉಚ್ಚಾರಣೆಯೊಂದಿಗೆ ಸೂರ್ಯನಾಡಿಯಿಂದ ರೇಚಕ
ಪೂರಕ – ಎಡಮೂಗು ; ಕುಂಭಕ ; ರೇಚನ – ಬಲ ಮೂಲಮೂಗು
ಪೂರಕ – ಬಲಮೂಗು ; ಕುಂಭಕ ; ರೇಚಕ – ಎಡಮೂಗು
ಇವೆರಡರ ಒಟ್ಟು ಅಭ್ಯಾಸ ಒಂದು ಪೂರ್ಣ ನಾಡೀಶುದ್ಧಿ ಪ್ರಾಣಾಯಾಮವೆನಿಸುತ್ತದೆ
ಇದರಿಂದ ಚಂದ್ರನಾಡಿಯಿಂದ ಹೊರಡುವ 36,000 ನಾಡಿಗಳು ಹಾಗೂ ಸೂರ್ಯನಾಡಿಯಿಂದ ಹೊರಡುವ 36,000 ನಾಡಿಗಳು ಸಮೂಲಾಗ್ರವಾಗಿ ಶುದ್ಧಿ ಹೊಂದುತ್ತವೆ.
ನಿರ್ಮನು ನಾಡೀಶುದ್ಧಿ:
ನಿರ್ಮನು ನಾಡೀಶುದ್ಧಿಯನ್ನು ಧೌತಿ ಕರ್ಮದಿಂದ ಆಚರಿಸಬೇಕು. ಧೌತಿ ಕರ್ಮವು ಷಡ್ ಕರ್ಮಕ್ರಿಯೆಗಳಲ್ಲಿ ಒಂದಾಗಿದೆ.
ಶೋಧನ ಕ್ರಿಯೆ – ಷಟ್ ಕ್ರಿಯೆಗಳು :
1) ಧೌತಿ 2) ಬಸ್ತಿ 3) ನೇತಿ 4) ಲೌಲಿಕೀ 5) ತ್ರಾಟಕ 6) ಕಪಾಲಭಾತಿ
ಧೌತಿ :
a) ಅಂತರ್ಧೌತಿ b) ದಂಡಧೌತಿ c) ಹೃದ್ಧೌತಿ d) ಮೂಲಶೋಧನ
ಅಂತಧೌ೯ತಿ :
a) ವಾತಸಾರ b) ವಾರಿಸಾರ c) ವಹ್ನಿಸಾರ d) ಬಹಿಷ್ಕೃತ
ವಾತಸಾರ :
ಕಾಗೆಯ ಕೊಕ್ಕಿನಂತೆ ತುಟಿಗಳನ್ನು ಕೊಳವೆಯಂತೆ ಮಾಡಿ ವಾಯುವನ್ನು ಒಳಗೆಳೆದು ಉದರದಲ್ಲಿ ಸಂಗ್ರಹಿಸಿಕೊಂಡು, ಹೊಟ್ಟೆಯ ಕೆಳಭಾಗವನ್ನು ಒತ್ತಿ ವಾಯುವನ್ನು ಹಿಮ್ಮಖವಾಗಿ ಹೊರಹಾಕಬೇಕು.
ಸಕಲ ರೋಗನಿವಾರಕ ; ಹೊಟ್ಟೆಯ ಹಾಗೂ ದೇಹದ ಉಷ್ಣತೆ ವೃದ್ಧಿಕಾರಕ.
ವಾರಿಸಾರ :
ಕಂಠದವರೆಗೆ ಬರುವಂತೆ ಸಾವಕಾಶವಾಗಿ ಉದರಕ್ಕೆ ನೀರನ್ನು ಕುಡಿದು (ಬಾಯಿಯಿಂದ ನೀರನ್ನು ಕುಡಿಯಬೇಕು) ನಂತರ ಹೊಟ್ಟೆಯನ್ನು ಒತ್ತಿ ಕೆಳಮುಖವಾಗಿ ಹೊರಹಾಕಬೇಕು. ಇದರಿಂದ ದೈವೀ ದೇಹ ಪಡೆಯಬಹುದು.
ಅಗ್ನಿಸಾರ :
ತನ್ನ ಹೊಕ್ಕಳ ಭಾಗವನ್ನು (ಹೊಟ್ಟೆ) ಬೆನ್ನೆಲುಬಿಗೆ ಒಂದು ನೂರು ಬಾರಿ ಒತ್ತಬೇಕು. ಇದರಿಂದ ಉದರರೋಗ ನಿರ್ಮೂಲ ಹಾಗೂ ಜಾಠರಾಗ್ನಿವರ್ಧಕ
ಬಹಿಷ್ಕೃತ :
ತುಟಿಗಳನ್ನು ಕಾಗೆಯ ಕೊಕ್ಕಿನಂತೆ ಮಾಡಿ (ಕಾಕಿಮುದ್ರೆ) ಉದರವನ್ನು ವಾಯುವಿನಿಂದ ತುಂಬಿ, ಅರ್ಧಯಾಮ = ಒಂದೂವರೆ ಗಂಟೆ ಕಾಲ ವಾಯುವನ್ನು ಧಾರಣ ಮಾಡಿ ನಂತರ ಕೆಳಮುಖದಿಂದ ಹೊರಹಾಕಬೇಕು.
ದಂತ ಧೌತಿ :
1) ದಂತಮೂಲ ಧೌತಿ b) ಜಿಹ್ವಾ ಶೋಧನ c) ಕರ್ಣ ಧೌತಿ d) ಕಪಾಲ ರಂದ್ರ ಧೌತಿ
1) ದಂತಮೂಲ ಧೌತಿ
ಖದಿರ ಆದಿ ದ್ರವ್ಯದಿಂದ ದಂತಮೂಲವನ್ನು (ಒಸಡು) ಶುದ್ಧಿಗೊಳಿಸಿ, ದಂತಮೂಲ ಹಾಗೂ ದಂತ ಸಂರಕ್ಷಣೆ ಮಾಡಿಕೊಳ್ಳಬೇಕು
2) ಜಿಹ್ವಾ ಶೋಧನ
ನಾಲಿಗೆಯನ್ನು ಶುದ್ಧ ಹಾಗೂ ಉದ್ದಗೊಳಿಸಲು ಆಚರಿಸುವ ಕ್ರಮವಾಗಿದೆ.
ತೋರುಬೆರಳು, ಮಧ್ಯದ ಬೆರಳು ಹಾಗೂ ಉಂಗುರದ ಬೆರಳುಗಳನ್ನು ಕಂಠದಲ್ಲಿಟ್ಟು ಜಿಹ್ವಾಮೂಲ ಶುದ್ಧಿಗೊಳಿಸಬೇಕು. ನಂತರ ನಾಲಿಗೆಯನ್ನು ಹೊರಕ್ಕೆ ಎಳೆದು ಬೆಣ್ಣೆಯಿಂದ ತಿಕ್ಕಿ ಹಿಂಡಬೇಕು ಇದನ್ನು ಪ್ರತಿನಿತ್ಯ ಸೂಯೋ೯ದಯ ಹಾಗೂ ಸೂರ್ಯಾಸ್ತ ಸಮಯದಲ್ಲಿ ಆಚರಿಸುವುದರಿಂದ ನಾಲಿಗೆ ಉದ್ದವಾಗುತ್ತದೆ.
3) ಕರ್ಣ ಧೌತಿ
ನಿತ್ಯವೂ ತರ್ಜನೀ ಬೆರಳಿನಿಂದ ತನ್ನೆರಡೂ ಕಿವಿಗಳನ್ನು ತಿಕ್ಕಿ ಶುದ್ಧಿಗೊಳಿಸಿದರೆ ಆಂತರಿಕ ನಾದವು ಪ್ರಕಟವಾಗುತ್ತದೆ.
4) ಕಪಾಲರಂಧ್ರ ಧೌತಿ
ಪ್ರತಿದಿನ ಬೆಳಿಗ್ಗೆ ಎದ್ದ ನಂತರ, ಊಟದ ನಂತರ ಹಾಗೂ ದಿನದ ಕೊನೆಯಲ್ಲಿ ತನ್ನ ಬಲ ಹೆಬ್ಬೆರಳನ್ನು ಅಂಗಳದ (palate) ಹಿಂಭಾಗದಲ್ಲಿಟ್ಟು ಭಾಲ ರಂಧ್ರವನ್ನು (ಕಿರುನಾಲಿಗೆಯ ಹಿಂಭಾಗ) ತಿಕ್ಕಬೇಕು. ಇದರ ಸತತ ಅಭ್ಯಾಸದಿಂದ ಕಫರೋಗ ನಿವಾರಣೆಯಾಗಿ ನಾಡೀಶುದ್ಧಿಯಾಗಿ ದಿವ್ಯ ದೃಷ್ಟಿಯುಂಟಾಗುವುದು.
ಹೃತ್ ಧೌತಿ :
a) ದಂಡ ಧೌತಿ b) ವಮನ ಧೌತಿ c) ವಸ್ತ್ರ ಧೌತಿ
ದಂಡ ಧೌತಿ :
ಬಾಳೆಯದಿಂಡು, ಅರಿಶಿನ ಅಥವಾ ವೇತ್ರದ ದಂಡವನ್ನು ಗಂಟಲಿನಲ್ಲಿ ನೂಕಿ ಮೇಲೆ ಕೆಳಗೆ ಮೆಲ್ಲಗೆ ಚಲಿಸಿ ನಂತರ ಹೊರ ತೆಗೆಯಬೇಕು. ಇದರಿಂದ ಕಫ, ಪಿತ್ತ, ವಾತ ನಿರ್ಹರಣೆಯಾಗಿ ಗಂಟಲುರೋಗ ನಿವಾರಣೆಯಾಗುತ್ತದೆ.
ವಮನ ಧೌತಿ :
ಊಟದ ನಂತರ ಗಂಟಲವರೆಗೆ ನೀರು ಕುಡಿದು ನಂತರ ಅದನ್ನು ಹೊರ ಹಾಕಬೇಕು. ನಿತ್ಯವೂ ಇದರ ಅಭ್ಯಾಸದಿಂದ ಕಫ, ಪಿತ್ತ ರೋಗ ನಿವಾರಣೆಯಾಗುವುದು.
ವಸ್ತ್ರ ಧೌತಿ
4 ಅಂಗುಲ ಅಗಲ 11 ಮೊಳ ಉದ್ದದ ತೆಳುವಾದ ಒದ್ದೆ ಬಟ್ಟೆಯನ್ನು ಸಾವಕಾಶವಾಗಿ ನುಂಗಬೇಕು. ನಂತರ ಮೆಲ್ಲಗೆ ಹೊರತೆಗೆಯಬೇಕು. ಇದರಿಂದ ಗುಲ್ಮ, ಜ್ವರ, ಯಕೃತ್, ಕುಷ್ಠ, ಪಿತ್ತ ರೋಗಗಳ ನಿವಾರಣೆಯಾಗುತ್ತದೆ. ಇದರ ನಿತ್ಯಭ್ಯಾಸದಿಂದ ಆರೋಗ್ಯಪ್ರಾಪ್ತಿ, ಶಕ್ತಿ ಹಾಗೂ ಪುಷ್ಟಿಯನ್ನು ನೀಡುತ್ತದೆ.
ಮಲ ಶೋಧನ
ಅರಿಶಿನದ ದಂಟಿನಿಂದ ಅಥವಾ ತನ್ನ ಮಧ್ಯದ ಬೆರಳಿನ ಸಹಾಯದಿಂದ ತನ್ನ ಗುದವನ್ನು ಪ್ರಯತ್ನ ಪೂರ್ವಕವಾಗಿ ಶುದ್ಧಗೊಳಿಸಬೇಕು. ಇದರಿಂದ ಮಲಬದ್ಧತೆ ಅಜೀಣ೯ ನಿವಾರಣೆಯಾಗಿ, ಜೀರ್ಣಶಕ್ತಿ ವೃದ್ಧಿ, ದೇಹಕ್ಕೆ ಪೋಷಣೆ ಹಾಗೂ ಹೊಳಪಾದ ಬಣ್ಣ ನೀಡುತ್ತದೆ.
ಬಸ್ತಿ :
a) ಜಲ ಬಸ್ತಿ b) ಸ್ಥಳ ಬಸ್ತಿ
ಜಲ ಬಸ್ತಿ :
ಕಟಿಭಾಗದವರೆಗೆ ನೀರು ಇರುವ ಜಾಗದಲ್ಲಿ, ಉತ್ಕಟಾಸನದಲ್ಲಿ ಕುಳಿತು ಗುದಭಾಗಕ್ಕೆ ಯೋಗ್ಯ ನಾಳವನ್ನು ಸೇರಿಸಿ, ಆಕುಂಚನ, ಪ್ರಸಾರಣ ಮಾಡುವುದು. ಇದರಿಂದ ಮೂತ್ರನಾಳ ರೋಗ, ಮಲಬದ್ಧತೆ, ಅಪಾನವಾಯುವಿನ ಕ್ರೂರತೆ ನಿವಾರಣೆ. ಕಾಮದೇವನಂತೆ ಶರೀರ ಆಕಷ೯ಕವಾಗುತ್ತದೆ.
ಸ್ಥಳ ಬಸ್ತಿ :
ಬೋರಲು ಮಲಗಿ ಕಟಿಪ್ರದೇಶ, ಕೆಳಹೊಟ್ಟೆ ಮೇಲೆತ್ತಿ ಅಶ್ವಿನೀ ಮುದ್ರೆಯೊಂದಿಗೆ ಗುದ ಸಂಕೋಚ – ಪ್ರಸರಣ. ಇದರಿಂದ ಜಾಠರಾಗ್ನಿ ಪ್ರದೀಪನ, ಅಜೀರ್ಣ ಪರಿಹಾರ.
ನೇತಿ :
ಒಂಭತ್ತು ಇಂಚು ಉದ್ದದ, ಸೂಕ್ಷ್ಮ ಮೃದುದಾರವನ್ನು ಮೂಗಿನ ಹೊರಳೆಯಲ್ಲಿ ಸೇರಿಸಿ ಬಾಯಿಯಿಂದ ಹೊರತೆಗೆಯುವುದು. ಇದರಿಂದ ಖೇಚರೀ ಸಿದ್ಧಿ, ಕಫದೋಷ ನಿವಾರಣೆ ದಿವ್ಯದೃಷ್ಟಿ ಲಾಭ.
ಜಲ ನೇತಿ :
ಬೆಚ್ಚನೆಯ ನೀರಿಗೆ ಸ್ವಲ್ಪ ಉಪ್ಪು ಸೇರಿಸಿ ಒಂದು ಮೂಗಿನ ಹೊರಳೆಯಿಂದ ಮತ್ತೊಂದು ಮೂಗಿನ ಹೊರಳೆಯ ಮೂಲಕ ಹೊರಹಾಕುವುದು. ಅಥವಾ ಮೂಗಿನಿಂದ ಸೆಳೆದು ಬಾಯಿಯಿಂದ ಹೊರಹಾಕುವುದು. ಬಾಯಿಂದ ನೀರನ್ನು ತುಂಬಿ ಮೂಗಿನಿಂದ ಹೊರಹಾಕುವುದು ಇದಕ್ಕೆ “ಶೀತ ಕ್ರಮ” ವೆನ್ನುವರು. ರಾತ್ರಿ ತಾಮ್ರದ ತಂಬಿಗೆಯಲ್ಲಿ ನೀರು ಸಂಗ್ರಹಿಸಿ ಬೆಳಿಗ್ಗೆ ಮೂಗಿನಿಂದ ಜಲಪಾನ ಮಾಡುವುದು. ಇದಕ್ಕೆ ಉಷಃ ಪಾನವೆಂದು ಕರೆಯುತ್ತಾರೆ.
ಉಪಯೋಗ : ಪಂಚಜ್ಞಾನೇಂದ್ರಿಯ ದೋಷ ನಿವಾರಣೆ, ತಲೆನೋವು, ಸೂರ್ಯಾವರ್ತ, ಶಿರಾವರ್ತ ಆದಿ ನೋವು ನಿವಾರಣೆ ಮುಪ್ಪು ತಡೆಯಬಹುದು. ಶರೀರ ಆರೋಗ್ಯವೃದ್ಧಿ, ಲಘುತ್ವ.
ತ್ರಾಟಕ :
ಕಣ್ಣು ಪಿಳುಕಿಸದೇ ಸೂಕ್ಷ್ಮ ವಸ್ತು ನಿರೀಕ್ಷಣೆ.
ಉಪಯೋಗ : ಇಲ್ಲಿ ಕಣ್ಣಿನ ರೋಗ ನಿವಾರಣೆ, ಶಾಂಭವೀ ಮುದ್ರೆ ಸಾಧನೆ.
(ಹಠಯೋಗ ಪ್ರದೀಪಿಕೆ)
ಅಂತಃ ತ್ರಾಟಕ :
ಕಣ್ಣು ಮುಚ್ಚಿ ಮನಸ್ಸನ್ನು ಭ್ರೂ ಮಧ್ಯೆ, ಹೃದಯ, ನಾಭಿ ಆದಿ ಷಟ್ ಚಕ್ರದಲ್ಲಿ ಕೇಂದ್ರೀಕರಿಸುವುದು.
ಮಧ್ಯ ತ್ರಾಟಕ :
ಓಂಕಾರ, ಮೂಗಿನ ತುದಿ, ಜ್ಯೋತಿಯನ್ನು ದೃಷ್ಟಿಸಿ ಕಣ್ಣು ಮಿಟುಕಿಸದೇ ನೋಡುವುದು.
ಬಾಹ್ಯ ತ್ರಾಟಕ :
ಸೂರ್ಯ, ಚಂದ್ರ, ನಕ್ಷತ್ರವನ್ನು ಸ್ಥಿರವಾಗಿ ದೃಷ್ಟಿಸಿ ನೋಡುವುದು.
ಉಪಯೋಗ : ಕಣ್ಣಿನ ರೋಗ ನಿವಾರಣೆ, ಕಣ್ಣು ತೇಜಸ್ವಿಯಾಗುವುದು, ಮನಸ್ಸಿನ ಏಕಾಗ್ರತೆ ದೊರೆಯುವುದು, ತಾಮಸ ಚಿತ್ತ ನಿವಾರಣೆ.
ಲೌಲಿಕಿ : (ಘೇರಂಡ ಸಂಹಿತಾ)
ಕಿಬ್ಬೊಟ್ಟೆಯನ್ನು ಬಲದಿಂದ ಎಡ, ಎಡದಿಂದ ಬಲಕ್ಕೆ ತಿರುಗುಸುವುದು. ಸರ್ವರೋಗ ನಿವಾರಕ, ದೇಹಾಗ್ನಿವರ್ಧಕ.
ಇದನ್ನೇ ಹಠಯೋಗ ಪ್ರದೀಪಿಕಾ ಗ್ರಂಥದಲ್ಲಿ ನೌಲಿ ಎಂದು ಕರೆದಿದ್ದಾರೆ.
ರೇಚಕವನ್ನು ಮಾಡಿ ಬಾಹ್ಯಕುಂಭಕವನ್ನು ಆಚರಿಸಿ ಹೊಟ್ಟೆಯನ್ನು ಬೆನ್ನುಮೂಳೆವರೆಗೆ ಸೆಳೆದು ಗುದಭಾಗವನ್ನು ಮೇಲಕ್ಕೆಳೆದು, ಉದರ ಸ್ನಾಯುವಿನ ಮೇಲೆ ಪ್ರಭುತ್ವ ಪಡೆಯಬೇಕು. ಬಲ ಹೊಟ್ಟೆ ಒಳಸೆಳೆದಾಗ ದಕ್ಷಿಣ ನೌಲಿ, ಎಡ ಹೊಟ್ಟೆ ಒಳ ಒತ್ತಿದಾಗ ವಾಮ ನೌಲಿ, ಹೊಟ್ಟೆಯ ಮಧ್ಯಭಾಗ ಒಳ ಒತ್ತಿ ಹಿಡಿದಾಗ ಮಧ್ಯ ನೌಲಿ ಎಂದು ಹೆಸರು.
ಪ್ರಯೋಜನ: ಮಂದಾಗ್ನಿ, ಉದರ ಶೂಲೆ, ಆಮ, ವಾತ, ಉದರ ಕಠಿಣತ್ವ, ಸಂಗ್ರಹಿಣೀ ಮೊದಲಾದ ಉದರರೋಗ ನಿವಾರಕ. ತ್ರಿದೋಷದಿಂದಾಗುವ ನೌಲಿ ರೋಗನಿವಾರಕ, ಮಲಬದ್ಧತೆ ನಿವಾರಕ, ಪಿತ್ತಕೋಶ, ಜಠರ, ಸಣ್ಣ ಹಾಗೂ ದೊಡ್ಡಕರುಳು, ಮೂತ್ರಕೋಶ ಸಶಕ್ತವಾಗುವುದು.
ಕಪಾಲಭಾತಿ :
ವಾತ ಕ್ರಮ : ವಾಯು ಸೇವನೆ ಎಡಮೂಗಿನಿಂದ, ಬಲಮೂಗಿನಿಂದ ವಾಯು ಹೊರಹಾಕುವುದು. ಮತ್ತೆ ವಾಯುವನ್ನು ಬಲ ಮೂಗಿನಿಂದ ಸೇವಿಸಿ ಎಡ ಮೂಗಿನಿಂದ ಹೊರಹಾಕುವುದು. ಪೂರಕ – ರೇಚಕ ವೇಗವಾಗಿ ಆಚರಿಸಬೇಕೇ ಹೊರತು ವಾಯುಧಾರಣ ಮಾಡಬಾರದು. ಇದು ಕಫದೋಷ ನಿವಾರಕ.
ವ್ಯೂತ್ ಕ್ರಮ : ಎರಡೂ ಮೂಗಿನಿಂದ ನೀರನ್ನು ಸೇವಿಸಿ ಬಾಯಿಯಿಂದ ಹೊರ ಹಾಕುವುದು. ಕಫರೋಗ ನಿವಾರಕ.
ಶೀತ್ ಕ್ರಮ : ಬಾಯಿಯಿಂದ ನೀರು ಸೇವಿಸಿ ಮೂಗಿನ ಹೊರಳೆಯಿಂದ ಹೊರಹಾಕುವುದು.ಇದರಿಂದ ತಾನು ದೇವನಂತೆ ಆಗುವನು.
ಹಠಯೋಗ ಪ್ರದೀಪಿಕಾ :
1) ವಾತಕ್ರಮ ಕಪಾಲ ಭಾತಿ
ರೇಚಕ – ಎಡ ಮೂಗು
ಪೂರಕ – ಎಡ ಮೂಗು
ರೇಚಕ – ಬಲ ಮೂಗು ಇದನ್ನು ವೇಗವಾಗಿ ಆಚರಿಸಬೇಕು
ಪೂರಕ – ಬಲ ಮೂಗು
ರೇಚಕ – ಎಡ ಮೂಗು
ಇದನ್ನು 10- 12 ರಿಂದ ಆರಂಭಿಸಿ 30 – 40 ರವರೆಗೆ ಹೆಚ್ಚಿಸಬೇಕು.
2) ಅನುಲೋಮ – ವಿಲೋಮ ಕಪಾಲ ಭಾತಿ:
ಕಮ್ಮಾರನ ತಿದಿಯಂತೆ ಎರಡು ಮೂಗಿನಿಂದ ಕ್ಷಿಪ್ರವಾಗಿ ಪೂರಕ ನಂತರ ಎರಡೂ ಮೂಗಿನಿಂದ ರೇಚಕ ಈ ಕ್ರಿಯೆಯಲ್ಲಿ ಹೊಟ್ಟೆ ವೇಗವಾಗಿ ಒಳಹೊರಗೆ ಹಿಂದು ಮುಂದಾಗಿ ಚಲಿಸಬೇಕು. 10 – 12 ರಿಂದ ಆರಂಭಿಸಿ 40 – 50 ವರೆಗೆ ಆಚರಿಸಬೇಕು.
3) ಚಂದ್ರಭೇದ : ಕೇವಲ ಎಡಮೂಗಿನಿಂದ ಕ್ಷಿಪ್ರವಾಗಿ ಪೂರಕ – ರೇಚಕ ಆಚರಿಸಬೇಕು.
4) ಸೂರ್ಯಭೇದ : ಕ್ಷಿಪ್ರವಾಗಿ ಬಲಮೂಗಿನಿಂದ ಪೂರಕ ರೇಚಕ ಆಚರಿಸಬೇಕು.
ಉಪಯೋಗ : ಶರೀರದ ಪ್ರತಿ ಸ್ನಾಯುತಂತು ಉದ್ದೀಪನ, ಉಸಿರಾಟದ ಸಮಸ್ಯೆ ನಿವಾರಣೆ, ರಕ್ತಶುದ್ಧಿ, ರಕ್ತ ಪರಿಚಲನೆ, ಶ್ವಾಸಕ್ರಿಯೆ ಉತ್ತಮ ವಾಗುವುದು. ಪಿತ್ತಾಶಯ, ಮೇದೋಜೀರಕ ಗ್ರಂಥಿ ಕಾರ್ಯಕ್ಷಮತೆ ಉತ್ತಮವಾಗುವುದು.
ಸಂಗ್ರಹ : ಘೇರಂಡ ಸಂಹಿತಾ & ಹಠಯೋಗ ಪ್ರದೀಪಿಕಾ
ಡಾ|| ಜಯಶ್ರೀ ಚಂದ್ರಶೇಖರ್
ಶೇಖರ್ ಕ್ಲಿನಿಕ್
ವಿದ್ಯಾರಣ್ಯಪುರಂ, ಮೈಸೂರು – 23
Mobile no : 9449978452